ಧರ್ಮಪಕ್ಷಿಗಳು

ಶಾಪದಿಂದ ಪಕ್ಷಿಗಳಾಗಿ ಹುಟ್ಟಿದ ಋಷಿಪುತ್ರರು.  ಒಮ್ಮೆ ಇಂದ್ರ ಸುಕೃಶನೆಂಬ ಬ್ರಾಹ್ಮಣನಲ್ಲಿಗೆ ಪಕ್ಷಿರೂಪದಿಂದ ಬಂದು ನರಮಾಂಸವನ್ನು ಬೇಡಿದ.  ಆಗ ಸುಕೃಶ ತನ್ನ ಮಕ್ಕಳನ್ನು ಕರೆದು ಆ ಪಕ್ಷಿಗೆ ಆಹಾರವಾಗುವಂತೆ ಹೇಳಿದ.  ಈ ಮಾತಿಗೆ ಮಕ್ಕಳು ಸಮ್ಮತಿಸದಿರಲು ನೀವು ಹಕ್ಕಿಗಳಾಗಿ ಜನಿಸಿ ಎಂದು ಶಾಪವಿತ್ತ.  ಕೊನೆಗೆ ಆ ಮಕ್ಕಳು ತಮ್ಮ ಅಪರಾಧವನ್ನು ಕ್ಷಮಿಸುವಂತೆ ತಂದೆಯನ್ನು ಕೇಳಲಾಗಿ ಆತ ಪಕ್ಷಿಜನ್ಮದಲ್ಲೂ ನಿಮಗೆ ಮನುಷ್ಯರಂತೆ ಮಾತನಾಡುವ ಶಕ್ತಿ ಇರಲಿ ಹಾಗೂ ಶಾಸ್ತ್ರಜ್ಞಾನ ಮರೆಯದಿರಲಿ ಎಂದು ಅನುಗ್ರಹಿಸಿದ.  ಅದರಂತೆ ಆ ಮಕ್ಕಳು ಪಕ್ಷಿಗಳಾಗಿ ಹುಟ್ಟಿ ಶಮೀಕಮುನಿಯಿಂದ ಪೋಷಿಸಲ್ಪಟ್ಟು ದೊಡ್ಡವಾದ ಮೇಲೆ ವಿಂಧ್ಯಪರ್ವತದಲ್ಲಿ ತಪಸ್ಸು ಮಾಡಿ ಶಾಪವಿಮೋಚನೆ ಪಡೆದವು.  ಜೈಮಿನಿಮುನಿ ಇವುಗಳಿಂದ ಅನೇಕ ಧರ್ಮ ರಹಸ್ಯಗಳನ್ನು ತಿಳಿದುಕೊಂಡನೆಂದು ಮಾರ್ಕಂಡೇಯ ಪುರಾಣದಿಂದ ತಿಳಿದುಬರುತ್ತದೆ.